ಸಾಮಾಜಿಕ ವರ್ಗ

	ಒಂದು ಬಗೆಯ ಸಾಮಾಜಿಕ, ಆರ್ಥಿಕ ಗುಂಪು (ಸೋಷಿಯಲ್ ಕ್ಲಾಸ್). ಸಮಾಜದ ಶ್ರೇಣೀಕೃತ ವ್ಯವಸ್ಥೆಯಲ್ಲಿ ವಿವಿಧ ಸಾಮಾಜಿಕ ಗುಂಪುಗಳು ವಿವಿಧ ಸ್ತರಗಳಲ್ಲಿರುತ್ತವೆ. ಸಮಾಜದಲ್ಲಿ ಕಂಡು ಬರುವ ಅಸಮಾನತೆಯ ಕಾರಣದಿಂದಾಗಿ ಎಲ್ಲ ಗುಂಪುಗಳಿಗೂ ಏಕ ರೀತಿಯ ಅವಕಾಶಗಳಾಗಲಿ, ಸ್ಥಾನವಾಗಲಿ ದೊರೆಯುವುದಿಲ್ಲ. ಹೇಗೆ ಸಮಾಜದಲ್ಲಿ ಅವಕಾಶಗಳ ಹಂಚಿಕೆಯಂತೆಯೇ ಅಧಿಕಾರ ಹಂಚಿಕೆಯಲ್ಲಿಯೂ ಏಕರೂಪತೆ ಇರುವುದಿಲ್ಲ. ಈ ಸ್ತರೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ-ಯಾವ ಗುಂಪುಗಳು ಸಂಪನ್ಮೂಲಗಳ ಒಡೆತನವನ್ನು ಹೆಚ್ಚಾಗಿ ಪಡೆದಿರುತ್ತಾರೋ ಆ ಗುಂಪುಗಳು ಮೇಲಿನ ಸ್ತರದಲ್ಲಿದ್ದು ಆರ್ಥಿಕ-ರಾಜಕೀಯ ಮತ್ತು ಸಾಮಾಜಿಕ ಅಧಿಕಾರವನ್ನು ಬಹುಮಟ್ಟಿಗೆ ತಮ್ಮದಾಗಿರಿಸಿಕೊಂಡಿರುತ್ತಾರೆ. ಸಮಾಜದ ಸ್ತರೀಕರಣಕ್ಕೆ ಕಾರಣವಾಗಿರುವ ವ್ಯವಸ್ಥೆಗಳಲ್ಲಿ ಸಾಮಾಜಿಕ ವರ್ಗವೂ ಒಂದು.

	ವರ್ಗ ಮತ್ತು ಸಾಮಾಜಿಕ ವರ್ಗ ಎಂಬ ಪರಿಕಲ್ಪನೆಗಳನ್ನು ಸಮಾನಾರ್ಥಕ ಪದಗಳಂತೆ ಅನೇಕ ಸಮಾಜಶಾಸ್ತ್ರೀಯ ವಿಶ್ಲೇಷಣೆಗಳಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಆಸ್ತಿ ಅಥವಾ ಆರ್ಥಿಕ ಸಂಪನ್ಮೂಲಗಳ ಒಡೆತನವನ್ನು ಹೊಂದಿರುವುದು ಇಲ್ಲವೇ ಹೊಂದದಿರುವುದು, ಯಾವ ವ್ಯಕ್ತಿಯಾವ ಸಾಮಾಜಿಕ ವರ್ಗದಲ್ಲಿ ಇರುತ್ತಾನೆಳೆ ಎಂಬುದನ್ನು ನಿರ್ಧರಿಸುತ್ತದೆ. ಆಯಾ ವ್ಯಕ್ತಿಯ ಗಳಿಕೆ, ಆಸ್ತಿಯ ಒಡೆತನ, ಉದ್ಯೋಗ, ಜೀವನ ಶೈಲಿ, ಪಡೆದಿರುವ ಅಧಿಕಾರ-ಇವೇ ಮುಂತಾದ ಅಂಶಗಳಿಗೆ ಅನುಗುಣವಾಗಿ, ಆ ವ್ಯಕ್ತಿಗೆ ಸಮಾಜ ಒಂದು ವರ್ಗಸ್ಥಾನವನ್ನು ನೀಡುತ್ತದೆ. ಉದಾಹರಣೆಗೆ, ಮೇಲ್ವರ್ಗ, ಮಧ್ಯಮ ವರ್ಗ, ಕೆಳವರ್ಗ ವಕ್ತಿಗಳ ವೃತ್ತಿಗಳನ್ನು ಆಧಾರವನ್ನಾಗಿರಿಸಿಕೊಂಡು ಕೂಡ ಅವರಿಗೆ ವರ್ಗಸ್ಥಾನವನ್ನು ನೀಡಲಾಗುತ್ತದೆ. 

	ಸಾಮಾಜಿಕ ವರ್ಗ ಒಂದು ತೆರನಾದ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ, ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಚಲಿಸಲು ಅವಕಾಶವಿದೆ. ಈ ಚಲನೆ ಮೇಲ್ಮುಖವಾಗಿರಬಹುದು, ಇಲ್ಲವೇ ಕೆಳಮುಖವಾಗಿರಬಹುದು. ವರ್ಗಕ್ಕೂ ಜಾತಿಗೂ ಇರುವ ಮೂಲಭೂತ ವ್ಯತ್ಯಾಸವೆಂದರೆ, ಜಾತಿ ವ್ಯವಸ್ಥೆಯಲ್ಲಿ ವ್ಯಕ್ತಿಸ್ಥಾನ ಹುಟ್ಟಿನಿಂದ ನಿರ್ಧರಿತವಾಗುತ್ತದೆ. ಜಾತಿ ಮುಚ್ಚಿದ ವ್ಯವಸ್ಥೆಯಾಗಿದ್ದು, ವ್ಯವಸ್ಥೆಯಲ್ಲಿ ಚಲನೆಗೆ ಅವಕಾಶವಿರುವುದಿಲ್ಲ.

	ಸಾಮಾಜಿಕ ವರ್ಗ ಪರಿಕಲ್ಪನೆಯ ಅಧ್ಯಯನಕ್ಕೆ ಅತ್ಯಂತ ಮಹತ್ತ್ವ ಕೊಡುಗೆಯನ್ನು ನೀಡಿದವನು ಕಾರ್ಲ್ ಮಾಕ್ರ್ಸ್. ಪ್ರತಿ ಸಮಾಜದಲ್ಲೂ ಸಂಪನ್ಮೂಲಗಳ ಒಡೆತನ, ಹಂಚಿಕೆ ಮತ್ತು ಅನುಭೋಗ-ಈ ಮೂರರಲ್ಲಿಯೂ ಅಸಮಾನತೆ ಎದ್ದು ಕಾಣುತ್ತದೆ ಎಂಬುದು ಈತನ ಅಭಿಪ್ರಾಯ. ಈ ಅಸಮಾನತೆಯ ಕಾರಣದಿಂದಾಗಿ ಕೆಲ ವರ್ಗಗಳು ಬದುಕಿನಲ್ಲಿ ಲಭ್ಯವಿರುವ ಎಲ್ಲ ಅನುಕೂಲಗಳನ್ನು ಅನಾಯಾಸವಾಗಿ ಪಡೆದರೆ, ಇತರರು ಜೀವನ ನಿರ್ವಹಣೆಗೂ ಹೋರಾಟ ನಡೆಸಬೇಕಾಗುತ್ತದೆ. ದುಡಿಯುವವರು ಅನೇಕರಾದರೆ, ಆ ದುಡಿಮೆಯ ಫಲವನ್ನು ಅನುಭೋಗಿಸಿ ತಮ್ಮ ಅಂತಸ್ತನ್ನು ಹೆಚ್ಚಿಸಿಕೊಳ್ಳುವವರು ಕೆಲವರು. ಎಲ್ಲಿ ಸಂಪನ್ಮೂಲ ಹಂಚಿಕೆಯಲ್ಲಿ ತರತಮವಿರುವಲ್ಲಿ ಶೋಷಣೆ ತಾನೇ ತಾನಾಗಿ ಹುಟ್ಟಿಕೊಳ್ಳುತ್ತದೆ. ಇದು ಸಮಾಜದಲ್ಲಿ ಒಂದು ಸಾಂಸ್ಥಿಕ ವ್ಯವಸ್ಥೆಯಾಗಿ ರೂಪುಗೊಂಡು, ವರ್ಗ ಅಸಮಾನತೆಯನ್ನು ಪುಷ್ಟೀಕರಣಗೊಳಿಸುತ್ತ ಬಂದಿದೆ.

	ಸಾಮಾಜಿಕ ವರ್ಗವನ್ನು ಕುರಿತ ಇವನ ವಿಶ್ಲೇಷಣೆ, ಅತ್ಯಂತ ಹೆಚ್ಚಾಗಿ ಅಳವಡಿಸಲ್ಪಟ್ಟಿರುವುದು ಬಂಡವಾಳಶಾಹಿ ಪದ್ಧತಿಯ ಅಧ್ಯಯನಗಳಲ್ಲಿ.ಸಮಾಜದ ಉತ್ಪಾದನಾ ವ್ಯವಸ್ಥೆಯ ಒಡೆತನವನ್ನು ತನ್ನದಾಗಿರಿಸಿಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆ, ದುಡಿಮೆಗಾರರ ಶ್ರಮವನ್ನು ಶೋಷಿಸಿ, ಸಮಾಜದ ಮೇಲಿನ ತನ್ನ ಸ್ವಾಮ್ಯವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಾ ಬಂದಿದೆ. ದುಡಿಮೆಗಾರ ಅಥವಾ ಶ್ರಮಜೀವಿ ವರ್ಗ ನಿರಂತರವಾಗಿ ದುಡಿಯುತ್ತಾ ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಗೆ ಒಳಪಟ್ಟಿದೆ. ಶ್ರಮಜೀವಿಗಳ ದುಡಿಮೆ ಫಲದಿಂದ ತಮ್ಮ ಆಸ್ತಿ ಹಾಗೂ ಸಂಪತ್ತುಗಳನ್ನು ಬಂಡವಾಳಶಾಹಿಗಳು ವೃದ್ಧಿಸಿಕೊಳ್ಳುತ್ತಾ ಹೋಗುತ್ತಾರೆ. ಬಂಡವಾಳಶಾಹಿ ಮತ್ತು ದುಡಿಮೆಗಾರ-ಈ ಎರಡು ಸಾಮಾಜಿಕ ವರ್ಗಗಳ ನಡುವಿನ ಸಂಘರ್ಷ ಸಾಮಾಜಿಕ ಬದಲಾವಣೆ ತರುವುದರಲ್ಲಿ ಗಮನಾರ್ಹ ಪಾತ್ರ ವಹಿಸುತ್ತವೆ ಎಂಬುದು ಈತನ ವಾದ.

	ಸಾಮಾಜಿಕ ವರ್ಗ ಅಧ್ಯಯನಕ್ಕೆ ಪ್ರಮುಖ ಕೊಡುಗೆ ನೀಡಿರುವ ಮತ್ತೋರ್ವ ಚಿಂತಕ ಮಾಕ್ಸ್ ವೇಬರ್. ಮಾಕ್ರ್ಸ್ ಉತ್ಪಾದನಾ ವ್ಯವಸ್ಥೆಯ ಒಡೆತನ ಹೊಂದಿರುವುದು ಇಲ್ಲವೇ ಹೊಂದದಿರುವುದನ್ನು ಸಾಮಾಜಿಕ ಅಸಮಾನತೆಯ ಮೂಲ ಕಾರಣವೆಂದು ಗುರುತಿಸಿದರೆ, ಈತ ಅಸಮಾನ ಜೀವನಾವಕಾಶಗಳನ್ನು ವರ್ಗಗಳ ನಡುವಣ ಅಸಮಾನತೆಗೆ ಪ್ರಮುಖ ಕಾರಣವೆಂದು ಗುರುತಿಸಿದ. ಸಮಾನ ರೀತಿಯ ಜೀವನಾವಕಾಶಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳು ಒಂದು ಸಾಮಾಜಿಕ ವರ್ಗದ ಸದಸ್ಯರಾಗಿರುತ್ತಾರೆ ಎಂದು ಹೇಳಿದ ಈತ, ತನ್ನ ವಿಶ್ಲೇಷಣೆಯಲ್ಲಿ ಸ್ಥಾನ, ಅಧಿಕಾರ, ಉದ್ಯೋಗಗಳು ನೀಡುವ ಹಾಗೂ ಬೇಡುವ ಕೌಶಲ್ಯಗಳು ಮತ್ತು ಇವುಗಳ ಕಾರಣದಿಂದಾಗಿ ವ್ಯಕ್ತಿಗಳಿಗೆ ದೊರೆಯುವ ಹಾಗೂ ದೊರೆಯದಿರುವ ಅವಕಾಶ-ಈ ಅಂಶಗಳಿಗೆ ಒತ್ತು ನೀಡಿದ್ದರಿಂದ ಸಾಮಾಜಿಕ ವರ್ಗಗಳನ್ನು ಕುರಿತ ಸಮಗ್ರ ದೃಷ್ಟಿಕೋನ ಈತನ ಚಿಂತನೆಯಲ್ಲಿ ದೊರೆಯುತ್ತದೆ. ಸಮಾಜಶಾಸ್ತ್ರೀಯ ಸಿದ್ಧಾಂತದಲ್ಲಿ ವರ್ಗ ವಿಶ್ಲೇಷಣೆಗೆ ಈತನ ಕೊಡುಗೆ, ಮಾಕ್ರ್ಸ್‍ನ ದೃಷ್ಟಿಕೋನಕ್ಕಿಂತ ವಿಶಿಷ್ಟವಾದುದು ಎಂದು ಹೇಳಲಾಗುತ್ತದೆ.

	ಸಾಮಾಜಿಕ ವರ್ಗ ಕುರಿತ ಚರ್ಚೆಯಲ್ಲಿ ಬಹು ಪ್ರಧಾನವಾಗಿ ಹೆಸರಿಸುವಂಥ ಎರಡು ಪರಿಕಲ್ಪನೆಗಳೆಂದರೆ ವರ್ಗ ಸಂಘರ್ಷ ಮತ್ತು ವರ್ಗ ಪ್ರಜ್ಞೆ. ಸಮಾಜದಲ್ಲಿ ವರ್ಗಗಳಿರುವವರೆಗೆ ವರ್ಗ ಸಂಘರ್ಷ ಅನಿವಾರ್ಯ. ಮಾನವ ಸಮಾಜದ ಇತಿಹಾಸವೇ ವರ್ಗಗಳ ನಡುವಿನ ಹೋರಾಟದ ಇತಿಹಾಸ ಎಂಬ ಮಾಕ್ರ್ಸ್‍ನ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದು. ಜೀವನಾವಶ್ಯಕತೆ ಮತ್ತು ಮೇಲ್ಮುಖ ಚಲನೆ ಸಾಧಿಸಲು ಇರುವ ಅವಕಾಶಗಳ ಹಂಚಿಕೆ ಮತ್ತು ಅನುಭೋಗದಲ್ಲಿ ಕಂಡು ಬರುವ ತರತಮವೇ ವರ್ಗ ಸಂಘರ್ಷಕ್ಕೆ ಮೂಲ ಕಾರಣ. ಈ ಸಂಘರ್ಷ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳಲ್ಲಿ ಒಂದು ಸಂಘಟನಾತ್ಮಕ ಸ್ವರೂಪ ಪಡೆಯುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆ ಕೊನೆಗೊಂಡು, ದುಡಿಮೆಗಾರರ ಶ್ರಮಕ್ಕೆ ಪ್ರತಿಫಲ ದೊರೆಯುವಂಥ ಸಾಮಾಜಿಕ ಕ್ರಾಂತಿ ಆಗಬೇಕೆಂಬ ಕೂಗಿನ ಹರಿಕಾರನಾದ ಮಾಕ್ರ್ಸ್ ಶೋಷಿತ ಧ್ವನಿಗೆ ನಿಶ್ಚಿತ ಸ್ವರೂಪ ನೀಡಿದ.

	ವರ್ಗಗಳ ನಡುವಿನ ಹೋರಾಟಕ್ಕೆ ಪ್ರಮುಖವಾಗಿ ಕಾರಣವಾಗುವ ಅಂಶಗಳಲ್ಲಿ ವರ್ಗ ಪ್ರಜ್ಞೆಯೂ ಒಂದು. ಒಂದು ವರ್ಗಕ್ಕೆ ಸೇರಿದ ವ್ಯಕ್ತಿಗಳಲ್ಲಿ, ಆ ವರ್ಗದ ಸದಸ್ಯರ ಸಮಾನ ಆಸಕ್ತಿ, ಸ್ಥಾನದ ಬಗೆಗಿನ ಅರಿವು ಮತ್ತು ಆಸ್ಥಾನ ಹಾಗೂ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ಅವರು ಮಾಡುವ ಪ್ರಯತ್ನ ಮತ್ತು ಇತರ ವರ್ಗಗಳ ಬಗ್ಗೆ ಇರುವ ವಿರೋಧ-ಇವುಗಳೆಲ್ಲದರ ಸಂಮ್ಮಿಶ್ರಣವೇ ವರ್ಗ ಪ್ರಜ್ಞೆ, ವರ್ಗಪ್ರಜ್ಞೆ ಹೆಚ್ಚಾಗುತ್ತಾ ಹೋದಂತೆ ವರ್ಗಸಂಘರ್ಷಗಳೂ ಹೆಚ್ಚಾಗುತ್ತವೆ.

	ಸಾಮಾಜಿಕ ವರ್ಗ ಎನ್ನುವ ಗುಂಪು ಬಹುತೇಕ ಸಮಾಜಗಳಲ್ಲಿ ಕಂಡು ಬರುವ ಒಂದು ಸ್ತರೀಕೃತ ವ್ಯವಸ್ಥೆ. ಅಂತಸ್ತು, ಆಸ್ತಿ ಮತ್ತು ಅಧಿಕಾರಗಳನ್ನು ಹೆಚ್ಚಾಗಿ ಪಡೆದಿರುವ ವರ್ಗಗಳು, ಇತರ ವರ್ಗಗಳನ್ನು ಶೋಷಿಸುವುದು, ತಮ್ಮ ವರ್ಗದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುವುದು ವರ್ಗ ವ್ಯವಸ್ಥೆಯಲ್ಲಿ ಕಂಡು ಬರುವ ಪ್ರವೃತ್ತಿಗಳು. ವರ್ಗಗಳ ನಡುವೆ ಚಲನೆಗೆ ಸಾಧ್ಯವಿದೆ ಎನ್ನುವುದು ನಿಜವಾದರೂ ಆರ್ಥಿಕವಾಗಿ ಕೆಳ ವರ್ಗಗಳಲ್ಲಿರುವ ಬಹುಮಂದಿಗೆ ಮೇಲ್ಮುಖ ಚಲನೆ ಸಾಧಿಸಲು ಬೇಕಾದ ಅಗತ್ಯಗಳ ತೀವ್ರಕೊರತೆಯಿರುತ್ತದೆ. ಸಮಾಜದಲ್ಲಿ ವರ್ಗ ಆಧಾರಿತ ಅಸಮಾನತೆ ನಶಿಸಬೇಕಾದರೆ, ವರ್ಗ ಸಂಘರ್ಷ ಒಂದು ಕ್ರಾಂತಿಕಾರಿ ಸ್ವರೂಪವನ್ನು ತಳೆದು, ಸಮಾಜದ ಸಂಪನ್ಮೂಲಗಳ ಹಂಚಿಕೆ ಮತ್ತು ಲಭ್ಯತೆಯಲ್ಲಿ ಸಮಾನತೆ ಏರ್ಪಾಡಾದಾಗ ಮಾತ್ರ ಸಾಧ್ಯ ಎಂದು ಹೇಳಬಹುದು.							
		(ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ